ಗೃಹಜ್ಯೋತಿ ಯೋಜನೆ ಜಾರಿಯಾದ ಮೇಲೆ ಜನರು ಕರೆಂಟ್ ಬಿಲ್ ಕಟ್ತಿಲ್ಲ. ಇತ್ತ BBMP ಸೇರಿದಂತೆ ಅನೇಕ ಸರ್ಕಾರಿ ಸಂಸ್ಥೆಗಳೂ ಸಾವಿರಾರು ಕೋಟಿ ರೂಪಾಯಿ ಕರೆಂಟ್ ಬಿಲ್ ಬಾಕಿ ಉಳಿಸಿಕೊಂಡಿವೆ. ಜನರಿಗೆಲ್ಲಾ ಬುದ್ಧಿ ಹೇಳೋ ಬಿಬಿಎಂಪಿಯೇ 800 ಕೋಟಿ ರೂ.ಗಿಂತ ಅಧಿಕ ಬಿಲ್ ಬಾಕಿ ಉಳಿಸಿಕೊಂಡಿದೆ. ಗೃಹಜ್ಯೋತಿ ಜಾರಿಯಾದ ಮೇಲೆ ಮತ್ತಷ್ಟು ಸಮಸ್ಯೆಗಳ ಸುಳಿಗೆ ಬೆಸ್ಕಾಂ ಸಿಲುಕಿಕೊಂಡಂತಿದೆ. ಒಂದುಕಡೆ ಜನರು ಕರೆಂಟ್ ಬಿಲ್ ಕಟ್ಟೋಕೆ ಮೀನಮೀಷ ಎಣಿಸಿದ್ರೆ, ಇತ್ತ ಸರ್ಕಾರಿ ಸಂಸ್ಥೆಗಳೂ ಕರೆಂಟ್ ಬಿಲ್ ಕಟ್ಟದೇ ಕಳ್ಳಾಟ ಆಡ್ತಿದೆ. ಅದರಲ್ಲೂ ತೆರಿಗೆ, ದಂಡ, ಶುಲ್ಕ ಅಂತ ಜನರ ಪ್ರಾಣ ತೆಗೆಯೋ ಬಿಬಿಎಂಪಿಯೇ ನೂರಾರು ಕೋಟಿ ರೂಪಾಯಿ ಬೆಸ್ಕಾಂಗೆ ಕರೆಂಟ್ ಬಾಕಿ ಉಳಿಸಿಕೊಂಡಿದೆ.ಬಿಬಿಎಂಪಿ ಸೇರಿದಂತೆ ರಾಜ್ಯದ ಹಲವು ಸರ್ಕಾರಿ ಸಂಸ್ಥೆಗಳು ಕೆಲವು ತಿಂಗಳಿನಿಂದ ಕರೆಂಟ್ ಬಿಲ್ ಕಟ್ಟಿಲ್ಲ. ಇದರಿಂದ ಬೆಸ್ಕಾಂಗೆ 6,374 ಕೋಟಿ ರೂಪಾಯಿ ಬಿಲ್ ಬರುವುದು ಬಾಕಿ ಇದೆ. ಪ್ರತಿಷ್ಠಿತ ಸಂಸ್ಥೆಗಳೇ ಸಾವಿರಾರು ಕೋಟಿ ಬಿಲ್ ಬಾಕಿ ಉಳಿಸಿಕೊಂಡಿದೆ. ಬಿಬಿಎಂಪಿ, ಜಲಮಂಡಳಿ, ನಗರಾಭಿವೃದ್ಧಿ ಇಲಾಖೆ, ಸಣ್ಣ ಮತ್ತು ದೊಡ್ಡ ನೀರಾವರಿ ಇಲಾಖೆ, ಇತರೆ ಸರ್ಕಾರಿ ಸಂಸ್ಥೆಗಳಿಂದ ಒಟ್ಟು 6,000 ಕೋಟಿ ರೂ. ಗಿಂತ ಅಧಿಕ ಬಿಲ್ ಬಾಕಿ ಬರಬೇಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಬೆಸ್ಕಾಂಗೆ ಬಿಬಿಎಂಪಿ 820 ಕೋಟಿ ರೂಪಾಯಿ ಕರೆಂಟ್ ಬಿಲ್ ಬಾಕಿ ಇಟ್ಟಿದೆ. ಬಿಬಿಎಂಪಿಗೆ ಹಲವು ಬಾರಿ ನೋಟೀಸ್ ಕೊಟ್ಟರೂ ಯಾವುದೇ ಪ್ರಯೋಜನವಾಗಿಲ್ಲ. ನಮ್ಮ ಮೇಲಿನ ಹೊರೆ ತಪ್ಪಿಸಲು ನಾವು ಅನಿವಾರ್ಯವಾಗಿ ವಸೂಲಿ ಮಾಡಲೇಬೇಕಾದ ಸ್ಥಿತಿಗೆ ಬಂದಿದೆ ಎಂದು ಬೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.